ಪುಟಗಳು

Friday, August 28, 2015

ಮಿಥ್ಯೆ


ಮಿಥ್ಯೆಯ ಕತ್ತಲಲ್ಲಿ ಸತ್ತು ಹೋಗದಿರಲಿ ಸತ್ಯ ಮುಖ
ಬದುಕು ಸವೆಸಬೇಕಾದೀತು ಪರದೆಯ ಹಿಂದೆ ಅಪರಿಚಿತನಂತೆ,
ಮನವು ಮಾಯೆಯ ವಶವಾದಂತೆ.
ತಿಳಿದಿದ್ದೂ ಒಂದಿಷ್ಟು ಭಯ
ಎಲ್ಲಿ ಬೆಳಕಿನೆದುರು ಬೆತ್ತಲಾಗುವೆನೆಂದು
ಭುವಿಗೆ ಇಳಿದಾಗಲೇ ಜೊತೆಗಿದ್ದ ವಕ್ರತೆಗಳ ತೆರೆದು.
ಆದರೆ,ಕತ್ತಲಲೇ ಕಳೆಯುವುದು ಎಷ್ಟು ದಿನ?
ನಡೆಯುತಿಹೆ ದೂರದಿ ಮಿನುಗುವ ಬೆಳಕಿನ ಮೂಲ ಹುಡುಕಿ
ಇಷ್ಟೇ ಪ್ರಾರ್ಥನೆ ಆಗದಿರಲಿ ಇದೂ ಕೂಡಾ ಮೊದಲು ದೊರಕಿದ ಮರೀಚಿಕೆಯಂತೆ!

Wednesday, December 10, 2014

ಬದಲಾವಣೆಯ ಗಾಳಿ ಬೀಸುತಿದೆಯೇ ಬ್ಲಾಗ್ ಸಾಹಿತ್ಯ?


ಲಿಪಿಯ ಆವಿಷ್ಕಾರದಿಂದ ಹಿಡಿದು ಭಾಷೆಯು ಇಂದಿನ ಸ್ಥಿತಿ ತಲುಪುವ ವೇಳೆಗೆ ಹಲವಾರು ಮಾರ್ಪಾಟುಗಳನ್ನ ಹೊಂದಿದೆ. ಕೆಲವೆಡೆ ಮೂಲರೂಪವೇ ಬದಲಾಗಿ ಹೋಗಿದ್ದೂ ಇದೆ. ಹೊಸತು, ಪರಕೀಯ ಸ್ವರೂಪಗಳು ಸೇರಿಕೊಂಡಿದ್ದು ಇದೆ. ಬರವಣಿಗೆಯ ಮೂಲಕ ಪದಗಳನ್ನು ಚಿತ್ರಿಸುವ ಕಲೆ ನಂತರವಷ್ಟೆ ಬೆಳೆದು ಬಂದಿದ್ದು.  ಬರವಣಿಗೆಯ ಮೊದಲ ರೂಪ ನಮಗೆ ಸಿಗುವುದು ಪೂರ್ವಜರು ವಾಸಿಸಿದ್ದ ಗುಹೆಗಳಲ್ಲಿ. ಅವರು ಬಿಡಿಸಿದ್ದ ಸಂಕೇತಗಳ ಮೂಲಕ. ಹರಪ್ಪ, ಮೊಹೆಂಜದಾರೋಗಳಂತಹ ನಾಗರಿಕತೆಗಳಲ್ಲಿ.  ಮುಂದುವರೆಯುತ್ತಾ ಶಾಸನಗಳು, ತಾಳೆಗರಿಗಳು ಪುಸ್ತಕಗಳು ಎಂಬುದಾಗಿ ಕಾಲ ಬದಲಾಗುತ್ತಾ ಬಂತು. ಹಿಂದಿನಿಂದ ನೋಡಿದರೆ ಸಾಹಿತ್ಯ /ಕಾವ್ಯ ಎಂಬ ಪದ ಇನ್ನೂ ನವಯುವಕ ಎಂದು ಕರೆದರೆ ಬಹುಶ: ತಪ್ಪಾಗಲಾರದು.
 ಪ್ರಾರಂಭದಿಂದಲೂ ಯಾವುದೇ ಭಾಷೆಯ ಸಾಹಿತ್ಯಗಳು ನಿಂತ ನೀರಂತೆ ಒಂದೇ ರೀತಿಯಾಗಿ ಇದ್ದಿದ್ದು ಇಲ್ಲ. ಕಾಲ, ದೇಶ, ರಾಜಕೀಯ, ಧಾರ್ಮಿಕ ಹೀಗೆ ಹಲವಾರು ಪ್ರಭಾವಗಳಿಗೆ ಒಳಗಾಗಿ ರೂಪಾಂತರ ಹೊಂದುತ್ತಾ ಬಂದಿದೆ. ಬದಲಾವಣೆಗೆ ಒಗ್ಗದ ಭಾಷೆಗಳು ಜನರಿಂದ ದೂರವಾದದ್ದು ಕಾಣಬಹುದು.  ಹಾಗೆಯೇ  ಕಾಲಕ್ಕೆ ತಕ್ಕ ಕೋಲವನ್ನ ಹೊಂದಿದ ಭಾಷೆಗಳು ಇನ್ನೂ ಚಾಲ್ತಿಯಲ್ಲಿರುವುದು ಕಾಣುತ್ತೇವೆ. ಬದಲಾವಣೆಗೆ ಮೈಯೊಡ್ಡುತ್ತಿರು ಜಗತ್ತಿನ ಹಲವಾರು ಭಾಷೆಗಳಲ್ಲಿ ಯಾವುದು ಆಲದ ಮರದಂತೆ ವಿಶಾಲವಾಗಿ ಬೆಳೆಯುತ್ತದೆ? ಯಾವುದು ಪರಾವಲಂಬಿ ಸಸ್ಯಕ್ಕೆ ಜಾಗ ನೀಡಿದ ಮರದಂತೆ ಸೊರಗುತ್ತದೆ? ಎಂಬುದು ಕಾಲ ತೀರ್ಮಾನಿಸುತ್ತದೆ.
ಕಾಲಾಂತರಗಳಿಂದ ಹಲವಾರು ಕವಿಗಳು/ಲೇಖಕರು ಸಾಹಿತ್ಯ ರಚನೆ ಮಾಡುತ್ತಾ ಬಂದಿದ್ದಾರೆ.  ಶ್ರೇಷ್ಠವಾದುದನ್ನು ಜನರು ಸ್ವೀಕರಿಸಿದ್ದಾರೆ. ಉಳಿದವುಗಳು ಕಾಲಚಕ್ರದ ಉರುಳುವಿಕೆಯ ನಡುವೆ ಸುಳಿವಿಲ್ಲದಂತೆ ಕಳೆದುಹೋಗಿದೆ. ನಿತ್ಯಜೀವನದಲ್ಲಿ ತಂತ್ರಜ್ಞಾನವು ಹಾಸುಹೊಕ್ಕಿರುವ ಇಂದಿನ ದಿನಗಳಲ್ಲಿ ಸಾಹಿತ್ಯವೂ ತಂತ್ರಜ್ಞಾನದ ಜೊತೆಯೆ  ಹೊಂದಿಕೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ಸಾಹಿತ್ಯವೆಂಬುದು ಜನರಿಂದ ದೂರವಾದರೂ ಆಶ್ಚರ್ಯವೇನಿಲ್ಲ. ಒಂದು ಕಾಲದಲ್ಲಿ ಲೇಖನಿ, ಮುದ್ರಣ ಯಂತ್ರಗಳು ಹೇಗೆ ಸಾಹಿತ್ಯದ ಪ್ರಚಾರಕ್ಕೆ ದಾರಿ ಮಾಡಿಕೊಟ್ಟಿತು. ಇಂದು ಸಾಮಾಜಿಕ ಜಾಲತಾಣಗಳು ಈ ಕೆಲಸ ಮಾಡುತ್ತಿವೆ ಎಂದೆನಿಸುತ್ತದೆ.  ಇವುಗಳು ಸಾಹಿತ್ಯವನ್ನು ಜನರಿಗೆ ತಲುಪಿಸಲು ಉತ್ತಮ ಮಾಧ್ಯಮವಾಗಿ ಪರಿವರ್ತಿತವಾಗುತ್ತಿದೆ. ಸಾಹಿತ್ಯದ ರೂಪ, ಗಾತ್ರ ಮುಂತಾದ ಬದಲಾವಣೆಗಳು ಇದ್ದರೂ ಹೊಸತೊಂದು ಟ್ರೆಂಡ್ ಉಂಟಾಗಿರುವುದು ಸುಳ್ಳಲ್ಲ. ಬ್ಲಾಗ್ ಸಾಹಿತ್ಯ ಎಂದು ಈಗಾಗಲೆ ಇದಕ್ಕೆ ನಾಮವೊಂದು ಜನಿಸಿಯಾಗಿದೆ.
ಇಲ್ಲಿ ತಮ್ಮ ಅನಿಸಿಕೆಗಳನ್ನೋ, ಬರವಣಿಗೆಯನ್ನೋ ಓದುಗನಿಗೆ ತಲುಪಿಸಲು ಇನ್ನೊಬ್ಬನ ಹಂಗಿಗೆ ಕಾಯ ಬೇಕಿಲ್ಲ. ಪತ್ರಿಕೆಗಳಿಗೆ ಕಳುಹಿಸಿ ಪ್ರಕಟಿಸುತ್ತಾರೋ ಇಲ್ಲವೋ ಎಂದು ನಿರೀಕ್ಚೆ ಇಡಬೇಕಾಗಿಲ್ಲ. ವೇಗವಾಗಿ ಸಾಗುತ್ತಿರುವ ಜಗತ್ತಿನಲ್ಲಿ ನೇರವಾಗಿ ಓದುಗನನ್ನು ತಲುಪಲು  ಅತ್ಯಂತ ಸರಳ ದಾರಿ ಈ ಬ್ಲಾಗ್‍ಗಳು ಹಾಗೂ ಸಾಮಾಜಿಕ ಜಾಲತಾಣಗಳು.  ಬರೆದಿದ್ದು ನಾಲ್ಕು ಸಾಲುಗಳಾದರು  ಅದರಲ್ಲೇ ಸುಲಭದರ್ಥವ ಹೇಳಿ ಮೆಚ್ಚುಗೆ ಗಳಿಸಬಹುದು. ನಾಲ್ಕು ಜನರ ನಡುವೆ ಬುದ್ದಿಜೀವಿಯಂತೆ ಫೋಸ್ ಕೂಡಾ ಕೊಡಬಹುದು. ನೇರವಾಗಿ ಹೇಳಲೆನಿಸಿದ್ದನ್ನು ಧೈರ್ಯವಾಗಿ ಬರೆಯಬಹುದು. ಯಾರ ಹಂಗಿಲ್ಲದೆ ಬರವಣಿಗೆಗೆ ಮುಕ್ತ ಅವಕಾಶ ಇಲ್ಲಿದೆ. ಯಾರು ಉತ್ತಮ ಎಂಬುದನ್ನು ನೇರವಾಗಿ ಓದುಗ ನಿರ್ಧರಿಸುತ್ತಾನೆ. 
ಇಲ್ಲಿ ಏನೇನೊ ಬರೆದು ಜನರನ್ನ ಮರುಳುಗೊಳಿಸುವುದು ಕಷ್ಟ. ಮುಕ್ತವಾಗಿ ಅಭಿಪ್ರಾಯ ಪ್ರಕಟಣೆ ಸಾಧ್ಯ. ಅಭಿಪ್ರಾಯದ ಹೇರಿಕೆ ಸಾಧ್ಯವಿಲ್ಲ. ತಾನು ಬರೆದಿದ್ದೇ ಮೇರು ಕೃತಿ ಎಂಬಂತೆ ಒಂದೆರಡು ಸಾಹಿತಿಗಳಿಂದ ಹೊಗಳಿಸಿಕೊಂಡು ನಡೆಯುವುದು ಕಷ್ಟಸಾಧ್ಯ. ಬುದ್ಧಿಜೀವಿಗಳಿಗೆ ಇದು ವಜ್ರ್ಯವಾಗುವುದು ಇಲ್ಲೆ. ತಮ್ಮ ಸಾಹಿತ್ಯಗಳು ಸಮಾಜದಿಂದ ನೇರವಾಗಿ ತಿರಸ್ಕರಿಸಲ್ಪಟ್ಟಾಗ ಕೆಲವರಿಗೆ ಸಹಿಸಲಸಾಧ್ಯವಾಗುವುದು ಸಹಜ. ಆಗಲೆ ಇವುಗಳಿಗೆ ವಿರೋಧ ಹುಟ್ಟಿಕೊಳ್ಳುವುದು. ಆದರೆ ಎಲ್ಲಾ ವಿಧದ ಅಭಿಪ್ರಾಯಗಳು  ಬ್ಲಾಗ್ ಸಾಹಿತ್ಯಗಳಿಗೆ ಅಂಟಿಕೊಂಡು ಚರ್ಚಿಸಲ್ಪಡುತ್ತಿದೆ ಎನ್ನುವುದು ವಿಷೇಷ.
ಹಾಗೆ ನೋಡಿದಲ್ಲಿ ಬ್ಲಾಗ್ ಸಾಹಿತಿಗಳಲ್ಲಿ ಎಲ್ಲಾ ವಿಧದವರೂ ಸಿಗುತ್ತಾರೆ, ತಮ್ಮ ಆತ್ಮಸಂತೋಷಕ್ಕೋಸ್ಕರ ಬರೆಯುವವರು,  ವ್ಯವಸ್ಥೆಯ ವಿರುದ್ಧ ದ್ವನಿಯೆತ್ತುವವರು, ಅನ್ಯಾಯವನ್ನು ವಿರೋಧಿಸುವವರು,  ಸೌಂದರ್ಯಾ, ವರ್uನೆಗಳಿಗೆ ಮಣೆ ಹಾಕುವವರು ಎಂಬಂತೆ ಎಲ್ಲಾ ಬರವಣಿಗೆಗೂ ಇಲ್ಲಿ ಮುಕ್ತ ಅವಕಾಶವಿದೆ.
 ಇದು ಒಂದೇ ತೆರನಾದ ಸಾಹಿತ್ಯದ ಏಕಾನತೆಗೆ ಬೇಸತ್ತು ಹೊಸ ಗಾಳಿಯ ಹುಡುಕುತ್ತಾ ಹೊರಟವರಿಗೆ ವೇದಿಕೆಯಾಗಿದ್ದು ಇರಬಹುದು.  ಇನ್ನು ಕೆಲವು ನೆಟ್ಟಿಗರ ಗುಂಪುಗಳು ಹಳೆಯ ಪಂಪ, ರನ್ನ, ಪೊನ್ನ ಮೊದಲಾದವರ ಕಾವ್ಯಗಳಿಗೆ ಹಿಂತಿರುಗಿ ಹೋಗಿ ಅವುಗಳ ಮೇಲೆ ಚರ್ಚೆಗಳಾನ್ನಾರಂಬಿಸಿ ಅದರ ಸತ್ವವನ್ನು ಕಡೆಯುವ ಕೆಲಸವೂ ನಡೆಯುತ್ತಿದೆ.  ಇಲ್ಲಿ ಸಾಮಾಜಿಕ ಚಿಂತನೆಗಳಿಗಿಂತ ಹೊರತಾಗಿರುವ ಬರಹಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಗಮನಾರ್ಹ ಅಂಶ. ನವ್ಯ ನವೋದಯ, ಪ್ರಗತಿಶೀಲ, ಬಂಡಾಯ ಹೀಗೆ ಹಲವು ದಶಕಗಳ ಬೆಳವಣಿಗೆಗೆ ರೋಸಿ ಹೋಗಿ ತಮ್ಮದೇ ಖಾಸಗಿತನವನ್ನು ಈ ಹೊಸ ಬ್ಲಾಗ್ ಸಾಹಿತ್ಯಗಳು  ಕಂಡುಕೊಂಡಿರುವುದು ಸತ್ಯವಾಗಿದ್ದರೆ ಇನ್ನೊಂದು ರೀತಿಯ ಬದಲಾವಣೆಗೆ ಇದು ಮುನ್ನುಡಿಯಾಗಿರಲೂಬಹುದು.  ದಿಕ್ಕು ತಪ್ಪಿ ಹೋದ ಸಾಹಿತ್ಯದ ಅರಿವು ಇರುವ ವಿದ್ಯಾವಂತರೇ ಇಲ್ಲಿ ಮುಖ್ಯವಾಗಿ ಕಾಣಿಸುತ್ತಿರುವುದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತದೆ. ಕೆಲವು ಬ್ಲಾಗ್ ಸಾಹಿತಗಳನ್ನು ಮಾತನಾಡಿಸಿದರೆ ‘ಇಸಮ್’ ಗಳಿಗಿಂತ ಅದಕ್ಕಿಂತ ಹಿಂದಿನ ಸಾಹಿತ್ಯವೇ ಅವರಿಗೆ ಪ್ರಿಯವಾಗಿರುವುದು ತಿಳಿಯುತ್ತದೆ.
“ಇಲೆಕ್ಟ್ರಾನಿಕ್ ಯುಗದ ಪರಿಭಾಷೆಯಲ್ಲಿ  ಆಧುನಿಕ ಜಾನಪದ ಸಾಹಿತ್ಯ ಎಂದು ಪರಿಗಣಿಸಿದರೆ ತಪ್ಪಾಗಲಾರದು. ಆದರೆ ಇಲ್ಲಿ ಸಾಮಾಜಿಕ ಪ್ರಜ್ಞೆಯ ಕೊರತೆ ಕಾಣುತ್ತಿದೆ. ಈ ಸಾಹಿತಯಕ್ಕೆ ವ್ಯಕ್ತವಾಗುವ ಪ್ರತಿಸ್ಪಂದನೆ ಕೂಡಾ ಕೆಲವೇ ಶಬ್ದಗಳಿಗೆ ಸೀಮಿತವಾಗಿದೆ. ಹೀಗಾಗಿ ಇದನ್ನು ವಿಮಶೆಯ ವ್ಯಾಪ್ತಿಗೆ ತರಬೇಕಾದ ಅಗತ್ಯವಿದೆ” ಎಂಬುದು ಅರವಿಂದ ಮಾಲಗಿತ್ತಿಯವರು ಇತ್ತೀಚೆಗಷ್ಟೇ ಅಭಿಪ್ರಾಯಪಟ್ಟಿದ್ದಾರೆ.
ಈ ಬ್ಲಾಗ್ ಸಾಹಿತ್ಯದ ಪರ ವಿರೋಧ ಸಾಕಷ್ಟು ಚರ್ಚೆಗಳಾಗುತ್ತಿದೆ. ಆದರೆ ಒಂದು ಕಾಲದಲ್ಲಿ ಕಾವ್ಯ ರಚನೆಗೆ ಇದ್ದ ಕಠಿಣ ನಿಯಮಗಳನ್ನು ಕಿತ್ತೆಸೆದು ಸಾಹಿತ್ಯ ಎಂಬುದನ್ನ ಸರಳಗೊಳಿಸಿದೆವೋ ಅಂದೇ ಬ್ಲಾಗ್ ಸಾಹಿತ್ಯಗಳು ಬೇಡ, ಶಬ್ದಗಳು ಸೀಮಿತವಾಗಿದೆ, ಅವುಗಳು ಸಾಹಿತ್ಯವೇ ಅಲ್ಲ ಎನ್ನುವ, ಇನ್ನೊಂದು ಬಗೆಯ ಸಾಹಿತ್ಯವನ್ನು ವಿರೋಧಿಸುವ ಹಕ್ಕು ಕಳೆದುಕೊಂಡಿದ್ದೇವೆ ಎನ್ನುವುದು ನನ್ನ ಅಭಿಪ್ರಾಯ.  ಸಾಹಿತ್ಯದಲ್ಲಿ ಯಾರು ಏನೇ ಬದಲಾವಣೆ ಮಾಡಿದರೂ, ಜನ ಸ್ವೀಕರಿಸಿದರೆಂದರೆ ಯಾವೊಬ್ಬನೂ ಕೂಗಾಡಿ ಪ್ರಯೋಜನವಿಲ್ಲ ಎಂಬುದು ಕಟು ಸತ್ಯ. ಅದೇ ರೀತಿ ಕಾಲ ಕಾಲಕ್ಕೆ ಬದಲಾಗುತ್ತಾ ಬಂದ ಸಾಹಿತ್ಯವು ಮತ್ತೊಂದು ರೂಪವನ್ನು ಪಡೆದುಕೊಳ್ಳುವಾಗ ವಿಮರ್ಶಿಸುವುದು ಅನಗತ್ಯವಾಗುತ್ತದೆ. ಬದಲಾವಣೆ ಜಗದ ನಿಯಮ. ಹಿಂದಿನ ಬದಲಾವಣೆಯ ಕರ್ಮಗಳಿಗನುಸಾರವಾಗಿ ಮುಂದಿನ ಬೆಳವಣಿಗೆ ಮುಂದುವರೆಯುತ್ತದೆ. ಆದರೆ ಅದು ಎಲ್ಲಿ ಕೊನೆಯಾಗಬೇಕು? ಅಥವಾ ಹಿಂದಿರುಗಿ ಹಳಯ ಕಾಲಕ್ಕೆ ನಡೆಯಬೇಕೋ ಎಂಬುದು ಕಾಲಚಕ್ರ ಉರುಳಿದಂತೆ ತಿಳಿಯಾಗಬೇಕಷ್ಟೆ. 

Thursday, March 13, 2014

ವರುಷಗಳ ನೆನಪು

ವರುಷಗಳೇ ಕಳೆದರೂ ಹರುಷಗಳು ಸಾಲು ಸಾಲು
ಸಾಲದಾಗಿದೆ ಜೊತೆಯಾಗೋ ಸಾವಿರ ನೆನಪು
ಸವಿಯಾಗಿದೆ ಸರಿಯಾದ ಜ್ನಾನದ ಬೆಳಕು
ಬೇಕಾಗಿದೆ ಇನ್ನೊಂದಿಷ್ಟನು ಪಡೆಯಲು ಇನ್ನಷ್ಟು ಹುರುಪು